1 2 3 4 5 6 7 8 9
|
ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು.
ಕನ್ನಡ ನುಡಿಯಲ್ಲಿ ಸಂಸ್ಕೃತದಂತೆ ಏಳು ವಿಭಕ್ತಿ ಪ್ರತ್ಯಯಗಳು ಇವೆ ಎಂದು ಹಲವು ವ್ಯಾಕರಣದ ಹೊತ್ತಿಗೆಗಳು ಹೇಳಿದರೂ, ಕನ್ನಡದಲ್ಲಿ ಸಂಸ್ಕೃತದ ಪ್ರಥಮ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನಾಮಪದದ ಕೊನೆಯಲ್ಲಿ ಪ್ರತ್ಯಯಗಳನ್ನಾಗಿ (postfix) ಸೇರಿಸಲಾಗುವುದು. ಅಲ್ಲದೆ ಸಂಸ್ಕೃತದಲ್ಲಿ ಬಳಕೆಯಾಗುವ ವಿಭಕ್ತಿಯ ಸಂದರ್ಭ, ಸನ್ನಿವೇಶಗಳು ಕನ್ನಡದ ಬಳಕೆಗಿಂತ ವಿಭಿನ್ನ.
ಉದಾ: ಗ್ರಾಮಂ ಗತಃ = ಗ್ರಾಮಕ್ಕೆ ಹೋದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಆದರೆ, ಗ್ರಾಮಕ್ಕೆ ಚತುರ್ಥಿ ವಿಭಕ್ತಿ. ಅದನ್ನೇ ಇನ್ನೊಂದು ರೀತಿ ಬರೆದಾಗ, ಗ್ರಾಮಂ ಗತಃ = ಗ್ರಾಮವನ್ನೈದಿದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಅಂತೆಯೇ, "ಗ್ರಾಮವನ್ನು" ಕೂಡ ದ್ವಿತೀಯಾ ವಿಭಕ್ತಿಯೇ.
ಹಾಗೆಯೇ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣದಂತೆ, ಮೂರು ಲಿಂಗಗಳು (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ), ಎಂದು ಹೇಳಿದರೂ, ಕನ್ನಡದ ನಿಜ ಸ್ವರೂಪದಂತೆ ಕನ್ನಡದಲ್ಲಿ ನಾಲ್ಕು ಲಿಂಗಗಳನ್ನು(ಗಂಡು, ಹೆಣ್ಣು, ಮಾನುಷ, ಅಮಾನುಷ) ಗುರುತಿಸಬಹುದು. ಈ ಸಂಗತಿ ಕನ್ನಡದ ವಚನಗಳ ಬಗ್ಗೆ ತಿಳಿದಾಗ ಇನ್ನು ತಿಳಿಯಾಗುವುದು.
ಕನ್ನಡವೂ ಬೇರೆ ದ್ರಾವಿಡ ನುಡಿಗಳಂತೆ ಮಾನವರಲ್ಲದ ಎಲ್ಲ ಪ್ರಾಣಿಗಳನ್ನೂ ನಪುಂಸಕಗಳಂತೆ ನೋಡುವುದು.
|